ಓದಲು ಬಂದವರು.......

Wednesday 4 May 2011

5ನೇ ವರ್ಷದ ಪ್ರಗತಿ ವರದಿ -2009


ಐದು ಹೆಜ್ಜೆಗಳ ಕುರಿತು.......


ಈ ನಮ್ಮ ಮ್ಮೆಲ್ಲರ ವಾಚನಾಲಯಕ್ಕೆ ಈಗ ಐದು ವರ್ಷಗಳು ಸಂದ ಕಾಲ. ೨೦೦೪ರ ಅಕ್ಟೋಬರ್ ೨ರಂದು ಅಧಿಕೃತವಾಗಿ ಆರಂಭಗೊಂಡಿತ್ತು. ಓದುವ ಆಂದೋಲನದ ನೆನಪಿಗಾಗಿ ಪ್ರತಿ ವರ್ಷ ಇದೇ  ದಿನದಂದು ವಾರ್ಷಿಕೋತ್ಸವವನ್ನು ವಾಚನಾಲಯದ ಆವರಣದಲ್ಲಿ ಹಮ್ಮಿಕೊಳ್ಳುತ್ತಿದ್ದೆವು. ಒಂದಿಬ್ಬರು  ಅತಿಥಿಗಳ ಜೊತೆ ಊರವರ ಒಂದು ಸಂಜೆ ಕಳೆಯುತ್ತಿತ್ತು. ಈ ಬಾರಿ ನಮ್ಮ ನಡಾವಳಿಯಲ್ಲಿ ಕೆಲವು ಬದಲಾವಣೆಗಳನ್ನು ತಂದುಕೊಂಡಿದ್ದೇವೆ. ವಾರ್ಷಿಕೋತ್ಸವ ಎಂಬ ಸಮಾರಂಭವನ್ನು ಕೈಬಿಟ್ಟಿದ್ದೇವೆ. ಆದರೆ ಪ್ರತಿ ವರ್ಷವೂ ವಾಚನಾಲಯದ ಬೆಳವಣಿಗೆ, ವಾರ್ಷಿಕ ಲೆಕ್ಕಾಚಾರಗಳನ್ನು ನಮ್ಮೆಲ್ಲ ಪ್ರಾಯೋಜಕರು,  ಹಿತೈಷಿಗಳ ಮುಂದಿಡಬೇಕೆಂದು ನಿರ್ಧರಿಸಿದ್ದೇವೆ. ಅದರ ಫಲಿತಾಂಶವೇ ಈ ವರದಿ.
೨೦೦೮ರ ಅಕ್ಟೋಬರನಿಂದ  ಈ ವರ್ಷದ ಸೆಪ್ಟೆಂಬರ್‌ವರೆಗಿನ ಚಟುವಟಿಕೆಗಳನ್ನು ದಾಖಲಿಸುತ್ತಿದ್ದೇವೆ. ಇಂದು ನಮ್ಮ ಜೊತೆಗಿರುವ ವರ್ಗಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಬಹುದು.   ೧. ದಾನಿಗಳು - ದೊಡ್ಡ ಮೊತ್ತದ ಹಣಕಾಸಿನ ನೆರವು, ಪುಸ್ತಕ ರೂಪದ ಕೊಡುಗೆ ಇತ್ತವರು. ೨. ಪ್ರಾಯೋಜಕರು - ಪ್ರತಿ ವರ್ಷ, ಪ್ರತಿ ತಿಂಗಳು ಇಂತಿಷ್ಟು ಎಂಬ ಮೊತ್ತವನ್ನು ನಮಗೆ ನೀಡಿ ಆ ಮೂಲಕ ನಿಯತಕಾಲಿಕಗಳನ್ನು ವಿಕ್ರಯಿಸಲು ಸಹಾಯ ಮಾಡಿದವರು. ೩. ಸದಸ್ಯರು - ಪ್ರತಿ ತಿಂಗಳು ನಿಗದಿತ ಶುಲ್ಕ ಕಟ್ಟಿ ಪುಸ್ತಕಗಳನ್ನು ಮನೆಗೊಯ್ದು ಓದುವವರು. ಮತ್ತು ೪. ಸಾಮಾನ್ಯ ಓದುಗರು - ವಾಚನಾಲಯ ತೆರೆದಿರುವ ಸಮಯದಲ್ಲಿ ತಮ್ಮ ಓದಿನ ದಾಹ ತೀರಿಸಿಕೊಳ್ಳಲು ಬರುವ ಗ್ರಾಮಸ್ಥರು, ಅಭ್ಯಾಗತರು.
ಈವರೆಗೆ ನಮ್ಮೊಂದಿಗೆ ಕೈಜೋಡಿಸಿರುವ ದಾಗಳ ಸಂಖ್ಯೆ ಒಟ್ಟು ಎಂಟು. ಐದು ವರ್ಷಗಳಲ್ಲಿ ನಮಗೆ ದಕ್ಕಿರುವ ಹಣ ಬೆಂಬಲ ೩೦,೪೫೬ ರೂ.. ಅದರಲ್ಲಿ ಮ್ಯಾಮ್ಕೋಸ್ ಒದಗಿಸಿದ ಹಣದಲ್ಲಿ   (೪,೪೫೬ ರೂ.) ಪುಸ್ತಕಗಳನ್ನು ಖರೀದಿಸಲಾಗಿದೆ. ವೆನಿಲ್ಲಾ ಸಣ್ಣ ಬೆಳೆಗಾರರ ಸಂಘ(ರಿ) ಸಾಗರ ನೀಡಿದ ಐದು  ಸಾವಿರ ರೂ.ಗಳಲ್ಲಿ ಒಂದು ಸಾವಿರ ರೂ.ಗಳನ್ನು ಈ ವರ್ಷ ಪ್ಲಾಸ್ಟಿಕ್ ಕುರ್ಚಿ ಖರೀದಿಸಲು ಬಳಸಲಾಗಿದೆ.  ಕೆನರಾ ಬ್ಯಾಂಕ್ ಜ್ಯುಬಿಲಿ ಎಜುಕೇಷನ್ ಫಂಡ್ ದೇಣಿಗೆಯಾಗಿತ್ತ ೮ ಸಾವಿರ ರೂ.ಗಳಲ್ಲಿ ಐದು ಸಾವಿರ ರೂ.ಗೆ ಕಬ್ಬಿಣದ ಅಲ್ಮೆರಾವನ್ನು ಖರೀದಿಸಲಾಗಿದೆ. ಉಳಿದಂತೆ ೨೧,೪೪೩ ರೂ.ಗಳನ್ನು ಕರ್ನಾಟಕ ಬ್ಯಾಂಕ್‌ನಲ್ಲಿ ಠೇವಣಿಯಾಗಿರಿಸಲಾಗಿದೆ.
ನಮಗೆ ಧನಸಹಾಯವಿತ್ತವರಲ್ಲಿ ಹೊರನಾಡಿನ ಭೀಮೇಶ್ವರ ಜೋಶಿಯವರು, ಭೀಮನಕೋಣೆಯ ಜಿ.ರಾಘವೇಂದ್ರ ಹಾಗೂ ಸಾವಿತ್ರಮ್ಮ & ಎಲ್.ಟಿ.ತಿಮ್ಮಪ್ಪ ಪ್ರತಿಷ್ಠಾನಗಳಿಂದ ತಲಾ 3 ಸಹಸ್ರ ರೂ.ಗಳ ಧನಸಹಾಯ ಸಿಕ್ಕಿದೆ. ಅಂತೆಯೇ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಹಾಗೂ ಹರ್ಷ ಕೈತೋಟ ಇವರಿಂದ ದಕ್ಕಿದ ತಲಾ ಎರಡು ಸಾವಿರ ರೂ.ಗಳ ಬೆಂಬಲವನ್ನೂ ಇಲ್ಲಿ ನೆನೆಯಬೇಕು. 
ಪ್ರಸ್ತುತ ನಮ್ಮೊಂದಿಗಿರುವ ಪ್ರಾಯೋಜಕರ ಸಂಖ್ಯೆ ೨೯. ಮಾಸಿಕ ೧೧ ರೂ.ಗಳಿಂದ ಗರಿಷ್ಟ ವಾರ್ಷಿಕ ೫೨೦ ರೂ. ನೀಡುವವರೆಗಿನ ಪ್ರಾಯೋಜಕರಿದ್ದಾರೆ. ಪ್ರಾಯೋಜಕರ ಪಟ್ಟಿಯನ್ನು ವಾಚನಾಲಯದ ಆವರಣದಲ್ಲಿ ಎದ್ದುಕಾಣುವಂತೆ ಪ್ರಕಾಶಿಸಲಾಗಿದೆ. ಇದೇ ಮಾದರಿಯಲ್ಲಿ ದಾನಿಗಳ ವಿವರವಾದ ಫಲಕ ಕೂಡ ಇಲ್ಲಿ ಜೋಡಿಸಲಾಗಿದೆ. ಪ್ರಸ್ತುತ ಲಭ್ಯವಾಗುತ್ತಿರುವ ನಿಯತಕಾಲಿಕಗಳ ಸಂಖ್ಯೆ ಬರೋಬ್ಬರಿ ೬೪. ಇದರಲ್ಲಿ ೨೨ ಪತ್ರಿಕೆಗಳು ಸಂಪಾದಕರು ಹಾಗೂ ಪ್ರಕಾಶಕರ ಉದಾರತೆಯಿಂದ ಉಚಿತವಾಗಿ ಲಭಿಸುತ್ತಿವೆ. ಉಳಿದ ೪೨ ಪತ್ರಿಕೆಗಳಿಗೆ ನಾವು ಪ್ರತಿ ತಿಂಗಳು ೭೦೧ ರೂ. ವೆಚ್ಚ ಮಾಡುತ್ತಿದ್ದೇವೆ. ಎಲ್ಲ ಪತ್ರಿಕೆಗಳ ವಿಶೇಷಾಂಕಗಳನ್ನು ಖರೀದಿಸಿ ಓದಲು ನೀಡುವುದನ್ನು ಇಲ್ಲಿ ಪ್ರಸ್ತಾಪಿಸಲೇಬೇಕು.
ಈ ವರ್ಷದಿಂದ ಸ್ಥಳೀಯ ಇಕ್ಕೇರಿ ಪ್ರೌಢಶಾಲೆಯ ಮಕ್ಕಳಿಗೆ ವಿಶೇಷ ಯೋಜನೆಯಡಿ ಶಿಕ್ಷಣ ಮೌಲ್ಯದ ಪತ್ರಿಕೆ, ಪುಸ್ತಕಗಳನ್ನು ಒದಗಿಸುತ್ತಿದ್ದೇವೆ. ಈ ಯೋಜನೆಗೆ ಒಟ್ಟು ೩೮ ಮಕ್ಕಳು ಸದಸ್ಯರಾಗಿದ್ದಾರೆ. ಇವರಿಗೆ ವಾರ್ಷಿಕ ಕೇವಲ ೧೫ ರೂ. ಸದಸ್ಯತ್ವ ಶುಲ್ಕ ಪಡೆಯಲಾಗುತ್ತಿದೆ. ಒಂದರ್ಥದಲ್ಲಿ, ಇಂದು ನಮ್ಮ ವಾಚನಾಲಯದ ಸದಸ್ಯರ ಸಂಖ್ಯೆ ೪೭. ಕೆನರಾ ಬ್ಯಾಂಕ್ ಜ್ಯುಬಿಲಿ ಎಜುಕೇಷನ್ ಫಂಡ್  ನಮ್ಮ ವಾಚನಾಲಯದ ಮೂಲಕ ಬಡ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಒದಗಿಸುವ ಯೋಜನೆಯನ್ನು ಹಮ್ಮಿಕೊಳ್ಳಲು ಯೋಜಿಸಿದ್ದು ಇದು ೨೦೧೦ರಿಂದ ಜಾರಿಗೆ ಬರುವ ಸಾಧ್ಯತೆಗಳಿವೆ. ಈ ವರ್ಷ ಅತ್ಯಮೂಲ್ಯ ಪುಸ್ತಕಗಳನ್ನು ಉಚಿತವಾಗಿ ಒದಗಿಸಿದ ಬೆಂಗಳೂರಿನ ನಾಗನಾಥಮೂರ್ತಿಯವರನ್ನು ಇಲ್ಲಿ ಸ್ಮರಿಸಲೇಬೇಕು. ವರದಿ  ಸಾಲಿನಲ್ಲಿ ತರಂಗ ಸಾಪ್ತಾಹಿಕ (ಅಕ್ಟೋಬರ್ ೨೯, ೦೯)ದಲ್ಲಿ ವಾಚನಾಲಯದ ಕುರಿತ ಮತ್ತೀಗಾರ ನಾಗರಾಜರ ಲೇಖನ ಪ್ರಕಟವಾಗಿದೆ. ವಿಕ್ರಮ ವಾರಪತ್ರಿಕೆಯ ದೀಪಾವಳಿ ವಿಶೇಷಾಂಕದಲ್ಲೂ ವಾಚನಾಲಯವನ್ನು ಉಲ್ಲೇಖಿಸಿ ವರದಿ ಬರೆಯಲಾಗಿದೆ. ಇವುಗಳೆಲ್ಲದರ ಪರಿಣಾಮವಾಗಿ ಹಲವರ ಬೆಂಬಲದ ಆಶ್ವಾಸನೆ ದೊರಕಿದೆ.
ದಿನದಿಂದ ದಿನಕ್ಕೆ ವೀಣಾ ಸ್ಮಾರಕ ಮಾವಿನಮನೆ ವಾಚನಾಲಯ ಪ್ರಗತಿಯತ್ತಲೇ ಸಾಗಿದೆ  ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಅದಕ್ಕೆ ಅತಿ ಮುಖ್ಯವಾಗಿ ನಿಮ್ಮ ಬೆಂಬಲ ಕಾರಣ. ಅದನ್ನು ಹೃತ್ಪೂರ್ವಕವಾಗಿ ನೆನೆಯುತ್ತೇವೆ.ನಿಮ್ಮ ನಿರಂತರ ನೆರವಿನ ಜೊತೆಗೆ ತಮ್ಮ ಬಳಗದ   ಇತರ ಸಾಹಿತ್ಯಾಭಿಮಾನಿಗಳ ಸಹಾಯವನ್ನೂ ನಮಗೆ ಒದಗಿಸಿದಲ್ಲಿ ನಾವು ಕೃತಜ್ಞರು.
ವಂದನೆಗಳೊಂದಿಗೆ, 




-ಮಾವೆಂಸ, 
ಸಂಚಾಲಕರು, ೦೧.೧೧.೨೦೦೯









No comments:

Post a Comment