ಓದಲು ಬಂದವರು.......

Wednesday 30 November 2011

ವಾರ್ಷಿಕ ವರದಿ - ೨೦೧೧




ಏಳು ವರ್ಷದ ಹಾದಿಯನ್ನು ಹಿಂತಿರುಗಿ ನೋಡಿದಾಗ....
ಮೊನ್ನೆ ಅಕ್ಟೋಬರ್ ೨, ಗಾಂಧಿ ಜಯಂತಿಯ ದಿನ ನಮ್ಮ ವಾಚನಾಲಯಕ್ಕೆ ಬರೋಬ್ಬರಿ ಏಳು ವರ್ಷ ಪೂರೈಸಿದ ಸಂಭ್ರಮ. ಊರಿನವರ ಈ ಪ್ರಯತ್ನ ಎರಡು ವರ್ಷ ಮುಗಿಸಿದರೆ ಹೆಚ್ಚು ಎಂದುಕೊಂಡವರಿಗೆ ನಾವು ಆಘಾತ ಮೂಡಿಸಿರುವುದು ಖುಷಿ ವಿಚಾರ. ಬಿಟ್ಟು ಹೋಗುತ್ತಿರುವ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಈ ಬಾರಿ ಪುನರಾರಂಭಿಸಬೇಕು ಎಂಬ ಯೋಚನೆಗೆ ಸಂಚಾಲಕನಾದ ನನ್ನ ವೈಯುಕ್ತಿಕ ಸಮಸ್ಯೆಗಳೇ ಅಡ್ಡಿಯಾಗಿರುವುದು ನನ್ನ ಮಟ್ಟಿಗೆ ಬೇಸರದ ಮಾತು. ಆದರೆ ಗ್ರಾಮಾಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಜೆ.ವಿ.ದಿನೇಶ್ ಹಾಗೂ ನಮ್ಮ ಕಾರ್ಯಕಾರಿ ಸಮಿತಿಯ ಒತ್ತಾಸೆಯಿಂದ ವಾರ್ಷಿಕೋತ್ಸವ ಆಚರಿಸುವ ನಿರ್ಧಾರಕ್ಕೆ ಬರಲಾಗಿದೆ. ದಿನಾಂಕ ನಿಗದಿಗೆ ಕೆಲ ಸಮಯ ಬೇಕು. ಅದರ ಹೊರತಾಗಿ, ವಾಚನಾಲಯದ ಬೆಳವಣಿಗೆಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ರಾಜ್ಯ ಮಟ್ಟದ ದಿನಪತ್ರಿಕೆಯನ್ನು ಈವರೆಗೆ ಒದಗಿಸಲಾಗದಿದ್ದುದು ದೊಡ್ಡ ಕೊರತೆಯಾಗಿತ್ತು. ಒಂದೆಡೆ ತಿಂಗಳೊಂದಕ್ಕೆ ಸರಿಸುಮಾರು ೧೦೦ ರೂ.ನ್ನು ಒಂದು ಪತ್ರಿಕೆಗೆ  ವೆಚ್ಚ ಮಾಡುವುದು ಸುಲಭದ ಮಾತಲ್ಲ. ಈ ಹಿನ್ನೆಲೆಯಲ್ಲಿ ದೈನಿಕ ಒದಗಿಸುವ ಯೋಚನೆಯನ್ನೇ ಕೈಬಿಟ್ಟಿದ್ದೆವು. ಆದರೆ ‘ಹೊಸದಿಗಂತ ರಾಜ್ಯ ದೈನಿಕ ಈಗ ಪ್ರತಿ ದಿನ ಲಭ್ಯ. ಇದನ್ನು ದಿಗಂತದ ಶಿವಮೊಗ್ಗ ಕಛೇರಿ ನಮಗೆ ಉಚಿತವಾಗಿ ಒದಗಿಸುತ್ತಿರುವುದು ವಿಶೇಷ. ಕೇವಲ ಒಂದು ದಿನದಲ್ಲಿ ನಮ್ಮ ವಿನಂತಿ ಪತ್ರ ಪಡೆದು, ತಟ್ಟನೆ ಪತ್ರಿಕೆಯ ಪ್ರತಿ ಒದಗಿಸಲು ಆರಂಭಿಸಿದ ಅವರ ಸಹಾಯ ನಮಗೆ ಪ್ರಾತಃಸ್ಮರಣೀಯ. ವಾಸ್ತವವಾಗಿ, ಆ ಪತ್ರಿಕೆಯ ಶಿವಮೊಗ್ಗ ಸಂಪಾದಕೀಯ ವಿಭಾಗದಲ್ಲಿರುವ ಸುಬ್ರಮಣ್ಯ ಹೊರಬೈಲು ಈ ಅನುಕೂಲ ನಮಗೆ ಸಿಗಲು ಮುಖ್ಯ ಕಾರಣ. ಅವರಿಗೆ ಹಾಗೂ ಪತ್ರಿಕಾ ಬಳಗಕ್ಕೆ ನಮ್ಮ ಕೃತಜ್ಞತೆಗಳು.
ಕಳೆದ ಬಾರಿ ಇನ್ಫೋಸಿಸ್‌ನಿಂದ ಕಂಪ್ಯೂಟರ್ ಸೌಲಭ್ಯ ಪಡೆದಿದ್ದರೂ ಅದಕ್ಕೆ ಪೂರಕವಾಗಿ ಅಗತ್ಯವಾಗಿದ್ದ ಯುಪಿಎಸ್ ಸೌಲಭ್ಯವನ್ನು ಸಾಲ ರೂಪದಲ್ಲಿ ಪಡೆದಿದ್ದೆವು. ನಮ್ಮ ವ್ಯವಹಾರದ ಬ್ಯಾಂಕ್ ಆಗಿರುವ ಕರ್ನಾಟಕ ಬ್ಯಾಂಕ್ ಈ ವರ್ಷ ಯುಪಿಎಸ್ ಖರೀದಿಗೆಂದು ಮೂರು ಸಾವಿರ ರೂ.ಗಳನ್ನು ಒದಗಿಸಿರುವುದು ನಮ್ಮ ಭಾರವನ್ನು ಕಡಿಮೆ ಮಾಡಿದಂತಾಗಿದೆ. ಬ್ಯಾಂಕ್‌ನ ಮುಖ್ಯ ಪ್ರಬಂಧಕರು ಹಾಗೂ ಶಾಖೆಯ ಎಲ್ಲ ಸ್ನೇಹಿತರಿಗೆ ಅಭಿನಂದನೆಗಳು. ವರದಿ ಸಾಲಿನಲ್ಲಿ ಮತ್ತೊಮ್ಮೆ ಧನಸಹಾಯ ಕೊಟ್ಟಿರುವ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು, ಎರಡು ಸಾವಿರ ರೂ ದಯಪಾಲಿಸಿದ್ದಾರೆ. ೨೦೦೮ರಲ್ಲಿಯೂ ಧರ್ಮಸ್ಥಳದಿಂದ ಎರಡು ಸಾವಿರ ರೂ.ಗಳ ಪ್ರಸಾದ ರೂಪದ ಧನಸಹಾಯ ಲಭ್ಯವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ನಮ್ಮ ಸ್ಥಳೀಯ ಎಡಜಿಗಳೇಮನೆ ಗ್ರಾಮ ಪಂಚಾಯ್ತಿಯ ಸಹಾಯವನ್ನು, ಬೆಂಬಲವನ್ನು ವಿಶೇಷವಾಗಿ ಸ್ಮರಿಸಬೇಕು. ಕಳೆದ ವರ್ಷ ಪಂಚಾಯ್ತಿ ನಿರ್ಣಯವೊಂದನ್ನು ಸ್ವೀಕರಿಸಿ, ಈ ವಾಚನಾಲಯಕ್ಕೆ ಪ್ರತಿ ವರ್ಷ ಒಂದು ಸಾವಿರ ರೂ.ಗಳ ಅನುದಾನ ನೀಡಲು ತೀರ್ಮಾನಿಸಿತ್ತು. ಅದರಂತೆ ಕಳೆದ ವರ್ಷ ಹಾಗೂ ಈ ಬಾರಿ ಈಗಾಗಲೇ ಒಂದು ಸಾವಿರ ರೂ.ಗಳನ್ನು ನಮಗೆ ಅದು ಒದಗಿಸಿದೆ. ಪ್ರತಿ ವರ್ಷ ಧನಸಹಾಯ ಕೊಡುವ ಯೋಚನೆ ಅಲ್ಲಿನ ಸದಸ್ಯ ಶಾರದಾಪುರದ ಮಹಾದೇವರದ್ದು. ಹಾಗೆಯೇ ಇದಕ್ಕೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಟಿ.ಪಿ.ಬಾಲಸುಬ್ರಮಣ್ಯ, ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಮತ್ತು ಕಾರ್ಯದರ್ಶಿ ಎಸ್.ಎಸ್.ಬಿರಾದಾರ್‌ರ ಬೆಂಬಲವೂ ವ್ಯಕ್ತವಾಗಿದ್ದು ನಮ್ಮ ಅದೃಷ್ಟ.
ಹಲವು ಕನಸುಗಳ ಜೊತೆಗೆ ವಾಚನಾಲಯಕ್ಕೆ ಹೆಚ್ಚು ಅನುಕೂಲಕರವಾದ ಕಟ್ಟಡ ಹೊಂದುವುದು ನಮ್ಮ ಮುಖ್ಯ ಆಶಯಗಳಲ್ಲೊಂದು. ಹತ್ತು ಸಾವಿರ ರೂ.ಗಳಂತೆ ದಾನಿಗಳಿಂದ ಹಣ ಪಡೆದು ಇದನ್ನು ಸಾಕಾರಗೊಳಿಸಿಕೊಳ್ಳಬಹುದು ಎಂಬ ನಿರೀಕ್ಷೆ ನಮ್ಮದು. ಇದಕ್ಕೆ ಕೂಡ ಈ ವರ್ಷ ಚಾಲನೆ ಸಿಕ್ಕಿದೆ. ಮಂಗಳೂರಿನವರಾದ ಮತ್ತು ಈಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಅಶೋಕ್ ಚರಣ್ ತಮ್ಮ ತಂದೆ  ದಿವಂಗತ ಹೆಚ್.ರಮೇಶ್‌ರಾವ್‌ರ ಸ್ಮರಣಾರ್ಥ ನಮಗೆ ಐದು ಸಾವಿರ ರೂ.ಗಳ ದೇಣಿಗೆಯನ್ನು ನೀಡಿದ್ದಾರೆ. ಇದೇ ಕ್ರಮದಲ್ಲಿ ಉಳಿದ ಸಹೃದಯರೂ ಮುಂದಾದರೆ ನಮ್ಮ ಕೆಲಸ ಹೂ ಎತ್ತಿದಂತೆ ಪೂರೈಸಲ್ಪಡುತ್ತದೆ. ಅಶೋಕ್ ಚರಣ್‌ರಿಗೆ ಹಾಗೂ ಅವರ ಸಹಾಯ ಸಿಗಲು ಕಾರಣೀಕೃತರಾದ ಬೆಂಕಟವಳ್ಳಿ ಬಂಗಾರೇಶ್ವರ್‌ರಿಗೆ ನಮ್ಮ ಬಹಿರಂಗ ಧನ್ಯವಾದ. ಬಂಗಾರೇಶ್ವರರವರು ನಮ್ಮ ಆರಂಭಿಕ ದಿನಗಳಿಂದಲೂ ಪ್ರಾಯೋಜಕರು.
ಸಹಾಯಹಸ್ತಗಳು ನಿರಂತರವಾಗಿ ನಮ್ಮ ಜೊತೆಗಿವೆ. ಈ ಬಾರಿಯೂ ಭೀಮನಕೋಣೆ ಜಿ.ರಾಘವೇಂದ್ರ ಒಂದು ಸಾವಿರ ರೂ.ಗಳ ದೇಣಿಗೆ ಕೊಟ್ಟಿದ್ದಾರೆ. ಒಮ್ಮೆಗೇ ೩,೧೯೯ ರೂ. ಕೊಟ್ಟು ಮೈಸೂರಿನ ಹೆಚ್.ವಿ.ವಾಗೀಶ್ ಐದು ವರ್ಷಗಳ ಕಾಲ ‘ದಿ ವೀಕ್ ಸಾಪ್ತಾಹಿಕ ನಮಗೆ ಲಭ್ಯವಾಗುವಂತೆ ನೋಡಿಕೊಂಡಿದ್ದಾರೆ. ವಾಗೀಶ್ ಗ್ರಾಮದ ನಿಟ್ಲಿ ಗಣಪತಿಯವರ ಅಳಿಯ ಎಂಬುದು ಸಾಂದರ್ಭಿಕ ನೆನಪಷ್ಟೇ.
ಈಗ ನಮ್ಮೊಂದಿಗಿರುವ ಪ್ರಾಯೋಜಕರು ೪೦ . ಕಳೆದ ಸಾಲಿಗಿಂತ ನಾಲ್ಕು ಮಂದಿ ಹೆಚ್ಚು. ೨೬ ಉಚಿತ ಪತ್ರಿಕೆಗಳು ಸೇರಿದಂತೆ ಲಭ್ಯವಾಗುತ್ತಿರುವ ನಿಯತಕಾಲಿಕಗಳ ಸಂಖ್ಯೆ ೬೭. ಇದೂ ಕಳೆದ ಸಾಲಿಗಿಂತ ನಾಲ್ಕು ಅಧಿಕ. ಈ ಶುಷ್ಕ ಅಂಕಿಅಂಶ ಕೂಡ ವಾಚನಾಲಯ ನಿಧಾನವಾಗಿಯಾದರೂ ಧನಾತ್ಮಕವಾಗಿ ಮುನ್ನಡೆದಿರುವುದನ್ನು  ಪ್ರತಿಫಲಿಸುತ್ತದೆ.
ಸತತ ಮೂರು ವರ್ಷಗಳಿಂದ ಸ್ಥಳೀಯ ಇಕ್ಕೇರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಯೋಜನೆಯಡಿ ಪುಸ್ತಕ, ಪತ್ರಿಕೆ ನೀಡಲಾಗುತ್ತಿದ್ದು, ವರದಿ ಸಾಲಿನಲ್ಲೂ ಮುಂದುವರೆದಿದೆ. ೪೦-೩೫ ಮಕ್ಕಳು ಸದಸ್ಯರಾಗುತ್ತಿದ್ದ  ಸಂಭ್ರಮ ಈಗಿಲ್ಲ. ಈ ಬಾರಿ ಕೇವಲ ಹತ್ತು ಮಕ್ಕಳು ಈ ಯೋಜನೆಯಡಿ ಚಂದಾದಾರರಾದುದು ಖುಷಿ ಕೊಡುವ ವಿಚಾರವಲ್ಲ. ನಮ್ಮ ಅಭಿಮಾನಿ ಪ್ರಾಯೋಜಕರಲ್ಲೊಬ್ಬರಾದ ಅಲ್ಲಿನ ಶಿಕ್ಷಕ ರಾಮಚಂದ್ರ ಹೆಗಡೆಯವರು  ಸುಸೂತ್ರವಾಗಿ ಈ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದಾರೆ.
ಕಳೆದ ಅಕ್ಟೋಬರ್‌ನಿಂದ ಈ ಬಾರಿಯ ಸೆಪ್ಟೆಂಬರ್‌ವರೆಗಿನ ವಾಚನಾಲಯದ ಆದಾಯ ೨೫,೭೫೬ ರೂ.  ಇದೇ ವೇಳೆ ವಿವಿಧ ಬಾಬತ್ತಿಗೆ ಆದ ಖರ್ಚು ೨೬,೧೫೨ ರೂ. ಈ ಅವಧಿಯ ೩೯೬ ರೂ. ಕೊರತೆ ದಾನಿಗಳು ಹಾಗೂ ಮಾತೃಸಂಸ್ಥೆ ಗ್ರಾಮಾಭಿವೃದ್ಧಿ ಸಮಿತಿಯ ವಾರ್ಷಿಕ ಬಜೆಟ್ ಕೊಡುಗೆಯಿಂದ ಸರಿದೂಗಿಸಲ್ಪಡುತ್ತದೆ ಎಂಬ ನಂಬಿಕೆ ಆಡಳಿತಕ್ಕಿದೆ.
ಕಳೆದ ವರ್ಷ ವಾಚನಾಲಯದ ಖಾತೆಯಲ್ಲಿ ೨೫,೨೮೨ ರೂ. ಠೇವಣಿ ಇರಿಸಲಾಗಿತ್ತು. ಈ ಬಾರಿ ಆ ಮೊತ್ತ ೪೩,೧೨೦ ರೂ.ಗೆ ಏರಿದೆ. ಅಂದರೆ ಠೇವಣಿ ಪ್ರಮಾಣದಲ್ಲಿ ೧೭,೮೩೮ ರೂ. ಹೆಚ್ಚುವರಿಯಾಗಿ ಸೇರ್ಪಡೆಯಾಗಿರುವುದು ಗಮನಾರ್ಹ ಅಂಶ. ಈ ಮೊತ್ತವನ್ನು ವಾಚನಾಲಯದ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಬಿದ್ದರೆ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ.
ವರ್ಷದ ೩೬೫ ದಿನಗಳಲ್ಲಿ ಸುಲಲಿತವಾಗಿ ಕೆಲವು ಹೆಜ್ಜೆಗಳನ್ನಾದರೂ ಇಡಲು ಅಕ್ಷರ ಅಭಿಮಾನಿಗಳಾಗಿರುವ, ಮುಖತಃ ಪರಿಚಯವಿಲ್ಲದಿದ್ದರೂ ಬೆಂಬಲಕ್ಕೆ ನಿಂತಿರುವ ಪ್ರಾಯೋಜಕರು, ದಾನಿಗಳು, ಪತ್ರಿಕಾ ಸಂಪಾದಕರು ಅಕ್ಷರಶಃ ಊರುಗೋಲು. ಈ ಸಹಕಾರ ಅನವರತವಾಗಿರಲಿ ಎಂಬುದೇ ನಮ್ಮ ಬೇಡಿಕೆ. ನಿಮ್ಮ ಆತ್ಮೀಯರಿಂದಲೂ ಈ ಅಕ್ಷರ ಆಂದೋಲನಕ್ಕೆ ಕೈಜೋಡಿಸಲು ಪ್ರೇರೇಪಿಸಿ ಎಂದು ವಿನಂತಿಸುತ್ತೇವೆ.
-ಮಾ.ವೆಂ.ಸ.ಪ್ರಸಾದ್,
ಸಂಚಾಲಕರು, ೨೨.೧೧.೨೦೧೧



ಸಂಪರ್ಕ- ಮಾ.ವೆಂ.ಸ.ಪ್ರಸಾದ್, ‘ಉದಯವಾಣಿ ವರದಿಗಾರ - ಸಾಗರ,
ಎಡಜಿಗಳೇಮನೆ, ಸಾಗರ-೫೭೭೪೦೧
ಫೋ: ೦೮೧೮೩ ೨೩೬೦೬೮, ೯೮೮೬೪೦೭೫೯೨
ಇ-ಮೇಲ್: mಚಿvemsಚಿ@gmಚಿiಟ.ಛಿom