ಓದಲು ಬಂದವರು.......

Wednesday 4 May 2011

ವಾರ್ಷಿಕ ವರದಿ - ೨೦೧೦




ಕಳೆದ ಅರ್ಧ ಡಜನ್‌ನಲ್ಲಿ ಈ ವರ್ಷ...............

ಕಳೆದ ವರ್ಷದಿಂದ ಅಕ್ಟೋಬರ್ ಎರಡರಂದು ವಾಚನಾಲಯದ ಆರಂಭ ದಿನದ ನೆನಪಿನಲ್ಲಿ ಆಚರಿಸುತ್ತಿದ್ದ  ವಾರ್ಷಿಕೋತ್ಸವದ ಸಮಾರಂಭವನ್ನು ಕೈಬಿಟ್ಟು ನಮ್ಮ ಎಲ್ಲ ಪ್ರಾಯೋಜಕರಿಗೆ, ದೇಣಿಗೆಯಿತ್ತ ದಾನಿಗಳಿಗೆ ವಾರ್ಷಿಕ ವರದಿಯನ್ನು ನೀಡುವ ಕ್ರಮವನ್ನು ಜಾರಿಗೊಳಿಸಿದ್ದೆವು. ಈ ನಮ್ಮ ಹೊಸ ಪದ್ಧತಿ ಬಹುಸಂಖ್ಯಾತರ ವಿಶ್ವಾಸವನ್ನು ಗಳಿಸಿಕೊಂಡಿತ್ತು. ಸದರಿ ಮಾದರಿಯನ್ನು ಸತತ ಎರಡನೇ ವರ್ಷ ಅರ್ಥಾತ್ ಆರನೇ ವಸಂತಕ್ಕೂ ಮುಂದುವರೆಸುತ್ತಿದ್ದೇವೆ.
ಈ ಓದುವ ಆಂದೋಲನ ಆರಂಭಗೊಂಡದ್ದು ೨೦೦೪ರ ಅಕ್ಟೋಬರ್ ಎರಡರಂದು. ಪುಟ್ಟ ಬಾಲಕ ಶ್ರೀಷನಿಂದ ವಾಚನಾಲಯದ ಉದ್ಘಾಟನೆಗೊಂಡದ್ದು ಒಂದು ವಿಶೇಷ. ಮುಂದಿನ ನಾಲ್ಕು ವರ್ಷ ವಿವಿಧ ಅತಿಥಿಗಳ ಸಮ್ಮುಖದಲ್ಲಿ ವಾರ್ಷಿಕೋತ್ಸವವನ್ನು ಆಚರಿಸಲಾಗಿತ್ತು. ಡಾ. ವಸುಂಧರಾ ಭೂಪತಿ, ಪೂರ್ಣಪ್ರಜ್ಞ ಬೇಳೂರು, ರೋಹಿಣಿ ಶರ್ಮ ಅಜ್ಜಂಪುರ, ಕೆ.ಎನ್.ವೆಂಕಟಗಿರಿ, ಜಿ.ಯೋಗೀಶ್ ಮೊದಲಾದ ಗಣ್ಯರು ಅತಿಥಿಗಳಾಗಿ ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿ ಮತ್ತೆ ವಾರ್ಷಿಕ ಸಮಾರಂಭವನ್ನು ನಡೆಸುವ ಕುರಿತು ವಾಚನಾಲಯ ಗಂಭೀರವಾಗಿ ಚಿಂತಿಸಿದೆ.
೨೦೦೯ರ ಅಕ್ಟೋಬರ್ ಒಂದರಿಂದ ೨೦೧೦ರ ಸೆಪ್ಟೆಂಬರ್ ೩೦ರವರೆಗಿನ ಹಣಕಾಸು ವ್ಯವಹಾರದ ವಿವರಗಳನ್ನು ಮೊದಲು ಪರಿಶೀಲಿಸೋಣ. ಈ ಅವಧಿಯಲ್ಲಿ ಜಮಾ ಬಂದ ಮೊತ್ತ ೩೭,೬೯೯/- ರೂ. ಆದರೆ ಖರ್ಚು ೩೮,೦೪೦/- ರೂ. ಆಗಿದ್ದು ಆದಾಯಕ್ಕಿಂತ ೩೪೧/- ರೂ. ಖರ್ಚು ಅಧಿಕವಾಗಿದೆ. ಈ ಆತಂಕದ ಹೊರತಾಗಿಯೂ ಈ ವರದಿ ಸಾಲಿನಲ್ಲಿ  ವಾಚನಾಲಯ ಗರಿಷ್ಟ ಮೊತ್ತದ ಆದಾಯವನ್ನು ಸಂಗ್ರಹಿಸಿರುವುದು ಗಮನಾರ್ಹ ಅಂಶ.
ವರದಿ ಸಾಲಿನಲ್ಲಿ ಬಲು ದೊಡ್ಡ ಸಹಾಯ ಸಿಕ್ಕಿರುವುದು ಶ್ರೀಮತಿ ಸುಧಾ ಮೂರ್ತಿಯವರ ಇನ್ಫೋಸಿಸ್ ಫೌಂಡೇಶನ್‌ನಿಂದ. ಕಂಪ್ಯೂಟರ್ ಖರೀದಿಯ ಬಾಬತ್ತಿಗೆಂದು ಫೌಂಡೇಶನ್ ನಮಗೆ ೧೭,೬೫೨/- ರೂ. ಮಂಜೂರು ಮಾಡಿತ್ತು. ಈ ಮೊತ್ತ ನೇರವಾಗಿ ಇನ್ಫೋಸಿಸ್‌ನಿಂದ ಸಾಗರದ ವಿವೇಕಾನಂದ ಸೈಬರ್ ಸೆಂಟರ್‌ಗೆ ಚೆಕ್ ರೂಪದಲ್ಲಿ ಪಾವತಿಯಾಗಿತ್ತು. ಸದರಿ ಸಂಸ್ಥೆ ತಮ್ಮ ದೇಣಿಗೆ ೭೫೦/- ರೂ. ಸೇರಿಸಿ ಕಂಪ್ಯೂಟರ್ ಉಪಕರಣಗಳನ್ನು ಒದಗಿಸಿತ್ತು. ಇದನ್ನು ವಾಚನಾಲಯದ ಕಛೇರಿಯಲ್ಲಿ ಅಳವಡಿಸಲಾಗಿದ್ದು ಗ್ರಾಮಸ್ಥರಿಗೆ ತರಬೇತಿ ಕೊಡುವ ಯೋಜನೆಯನ್ನು ಈಗಾಗಲೆ ಜಾರಿಗೊಳಿಸಲಾಗಿದೆ. ಸಾಂಕೇತಿಕ ಶುಲ್ಕ ಪಡೆದು ಈವರೆಗೆ ಏಳು ಮಂದಿಗೆ ತರಬೇತಿ ಕೊಡಲಾಗುತ್ತಿದೆ.
ನಮ್ಮ ಐದನೇ ವರ್ಷದ ವಾರ್ಷಿಕ ವರದಿಯನ್ನು ಗಮನಿಸಿದ ಇನ್ಫೋಸಿಸ್‌ನ ಶ್ರೀಮತಿ ಸುಧಾಮೂರ್ತಿಯವರು ತಾವೇ ಫೋನ್ ಮಾಡಿ ಕಂಪ್ಯೂಟರ್ ಸಹಾಯ ಒದಗಿಸುವ ಭರವಸೆ ಇತ್ತಿದ್ದು ಸ್ಮರಣಾರ್ಹ. ಫಲಿತಾಂಶವೆಂಬಂತೆ, ವಿನಂತಿ ಪತ್ರಗಳಿಗಿಂತ ಪಾರದರ್ಶಕ ವಾರ್ಷಿಕ ವರದಿ ಹೆಚ್ಚು ಪ್ರಭಾವಶಾಲಿ ಎಂದು ಭಾವಿಸುವಂತಾಗಿದೆ.
ಕಂಪ್ಯೂಟರ್ ಸೌಕರ್ಯಕ್ಕೆ ಪೂರಕವಾಗಿ ವಾಚನಾಲಯದ ಖಾತೆಯಿಂದ ಯುಪಿಎಸ್ ಖರೀದಿಸಲಾಗಿದೆ. ಪಶುವೈದ್ಯ ಸ್ನೇಹಿತರಾದ ನಂದೀತಳೆ ಡಾ. ಶ್ರೀಪಾದರಾವ್ ಕಂಪ್ಯೂಟರ್‌ಗೆ ಸೂಕ್ತವಾದ ಟೇಬಲ್‌ನ ಕೊಡುಗೆ ಇತ್ತಿದ್ದಾರೆ. ಒಂದೂವರೆ ಸಾವಿರ ರೂ. ವೆಚ್ಚದ ದೇಣಿಗೆಯಿತ್ತಿದ್ದಕ್ಕೆ ನಮ್ಮ ಧನ್ಯವಾದ. ೨೦೧೦ರ ವರ್ಷಾರಂಭದಲ್ಲಿಯೇ ಬೆಂಗಳೂರಿನ ‘ನಿಜಕವೆ’ ದತ್ತಿ ನಮಗೆ ಐದು ಸಾವಿರದ ಮುನ್ನೂರು (೫,೩೦೦/-) ರೂ. ವೆಚ್ಚದ ಅಲ್ಮೆರಾವೊಂದನ್ನು ಒದಗಿಸಿದೆ. ಇದಕ್ಕೆ ಕಾರಣಕರ್ತರಾದ ನಿಜಕವೆ ದತ್ತಿಯ ಬಿ.ಆರ್.ಪ್ರಸಾದ್‌ರನ್ನು ಸದಾ ಸ್ಮರಿಸಿಕೊಳ್ಳುತ್ತೇವೆ. ಅಂತೆಯೇ ಈ ವರ್ಷ ಕೂಡ ದೇಣಿಗೆಗಳು ಲಭ್ಯವಾಗಿದ್ದು ಹೊರನಾಡು ಕ್ಷೇತ್ರದ ಭೀಮೇಶ್ವರ ಜೋಶಿಯವರು ಹಾಗೂ ಭೀಮನಕೋಣೆಯ ಜಿ.ರಾಘವೇಂದ್ರ ತಲಾ ಒಂದು ಸಾವಿರ ರೂ.ಗಳ ದೇಣಿಗೆ ಇತ್ತಿದ್ದು ಇವನ್ನು ಠೇವಣಿ ಮೊತ್ತಕ್ಕೆ ಸೇರಿಸಲಾಗಿದೆ.
ಈಗ ನಮ್ಮೊಂದಿಗಿರುವ ಪ್ರಾಯೋಜಕರು ೩೬. ಕಳೆದ ಸಾಲಿಗಿಂತ ಏಳು ಮಂದಿ ಹೆಚ್ಚು. ೨೧ ಉಚಿತ ಪತ್ರಿಕೆಗಳು ಸೇರಿದಂತೆ ಲಭ್ಯವಾಗುತ್ತಿರುವ ನಿಯತಕಾಲಿಕಗಳ ಸಂಖ್ಯೆ ೬೩. ಪ್ರಾಯೋಜಕರ ಸಂಖ್ಯೆ ಹೆಚ್ಚಿದ್ದರೂ ಪತ್ರಿಕೆಗಳ ಸಂಖ್ಯೆ ತುಸು ಕುಸಿಯಲು ಒಮ್ಮೆಗೇ ಏರಿರುವ ಪತ್ರಿಕೆಗಳ ಬೆಲೆ ಮುಖ್ಯ ಕಾರಣ. ಆದರೂ ಈಗಲೂ ಕನ್ನಡದ ಬಹುಪಾಲು ಪತ್ರಿಕೆಗಳು ನಮ್ಮಲ್ಲಿ ಲಭಿಸುತ್ತದೆ ಎನ್ನುವುದನ್ನು ಹೆಮ್ಮೆಯಿಂಧ ಹೇಳಿಕೊಳ್ಳಬಯಸುತ್ತೇವೆ.
ಆರು ವಸಂತಗಳನ್ನು ಪೂರೈಸಿ ಗಟ್ಟಿಯಾಗಿ ನಿಂತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಸಹೃದಯರ ಪ್ರಾಯೋಜಕತ್ವವನ್ನು ನಿರೀಕ್ಷಿಸಿದ್ದೆವು. ಅದು ಫಲ ಕಂಡಿಲ್ಲ ಎನ್ನುವುದಕ್ಕೆ ಚೂರು ನಿರಾಶೆಯೂ ಅನುಭವಕ್ಕೆ ಬಂದಿದೆ. ಸಂಸ್ಥೆಯೊಂದಕ್ಕೆ ಕೊಡಬೇಕಾದ ಪ್ರಚಾರವನ್ನು ನಮಗೆ ಕೊಡಲಾಗುತ್ತಿಲ್ಲ ಎನ್ನುವುದೂ ಈ ಹಿನ್ನಡೆಗೆ ಕಾರಣವಿರಬಹುದು. ದೇಣಿಗೆಗಳ ಸಂಗ್ರಹದಿಂದ ೨೫,೨೮೨/- ರೂ.ಗಳನ್ನು ಠೇವಣಿಯಾಗಿ ಇರಿಸಲಾಗಿದೆ. ಈ ಮೊತ್ತ ಕಳೆದ ವರ್ಷದ ಠೇವಣಿಗೆ ೩,೮೩೯/- ರೂ.ಸೇರಿಸಿದಂತಾಗಿದೆ.
ಈ ವರ್ಷವೂ ಸ್ಥಳೀಯ ಇಕ್ಕೇರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಯೋಜನೆಯಡಿ ಪತ್ರಿಕೆ, ಪುಸ್ತಕಗಳನ್ನು ಒದಗಿಸುತ್ತಿದ್ದು ಅಲ್ಲಿನ ಶಿಕ್ಷಕ ರಾಮಚಂದ್ರ ಹೆಗಡೆ ಇದನ್ನು ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ೩೫ ಮಕ್ಕಳು ರಿಯಾಯತಿ ದರ ೧೫/- ರೂ. ಕೊಟ್ಟು ಸದಸ್ಯರಾಗಿದ್ದಾರೆ. ಆರು ಬಿಡಿ ಸಾಮಾನ್ಯ ಸದಸ್ಯರು ಸೇರಿದಂತೆ ೪೧ ಮಂದಿ ಸದಸ್ಯತ್ವ ಪಡೆದಂತಾಗಿದೆ. ಪತ್ರಿಕೆಗಳಿಗಾಗಿ ಮಾಸಿಕ ೮೫೯ ರೂ. ವೆಚ್ಚ ಮಾಡಲಾಗುತ್ತಿದೆ. ಇದು ಕಳೆದ ಬಾರಿಗಿಂತ ೧೫೮/- ರೂ. ಹೆಚ್ಚು.
ಮುಂಬರುವ ದಿನಗಳಲ್ಲಿ ಹಲವು ಗುರಿಗಳನ್ನು ಇರಿಸಿಕೊಳ್ಳಲಾಗಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರಿಗೆ ಆದ್ಯತೆ ಮೇಲೆ ಕಂಪ್ಯೂಟರ್ ತರಬೇತಿ ಒದಗಿಸಬೇಕೆನ್ನುವ ಯೋಜನೆಯಿದೆ. ಈಗಾಗಲೇ ಪ್ರಸ್ತಾವನೆಯನ್ನು ಪಂಚಾಯ್ತಿಗೆ ಅನುಮೋದನೆಗೆ ಸಲ್ಲಿಸಲಾಗಿದೆ. ಸ್ವಂತ ಕಟ್ಟಡದ ಕುರಿತಾಗಿಯೂ ಕನಸು ಕಾಣಲಾರಂಭಿಸಿದ್ದೇವೆ. ಗ್ರಾಮದ ಅಷ್ಟೂ ಮಾಹಿತಿಯ ‘ಡಾಟಾ ಸೆಂಟರ್’ ಮಾಡಲು ಅಗತ್ಯವಾದ ಕಂಪ್ಯೂಟರ್ ಸಿಕ್ಕಿರುವುದರಿಂದ ಒಂದು ಹೆಜ್ಜೆಯನ್ನು ಆ ದಿಕ್ಕಿನಲ್ಲಿ ಇರಿಸಿದಂತಾಗಿದೆ.
ಪ್ರಗತಿಯ ಹಾದಿಯಲ್ಲಿ ಕೆಲವು ಹೆಜ್ಜೆಗಳನ್ನಾದರೂ ಇಡಲು ಕಾರಣಕರ್ತರು ನೀವು- ಪ್ರಾಯೋಜಕರಾಗಿ, ಉಚಿತ ಪತ್ರಿಕೆ ಕಳುಹಿಸಿಕೊಡುವವರಾಗಿ, ಕೊಡುಗೈ ದಾನಿಗಳಾಗಿ ನಮ್ಮನ್ನು ಉಪಕರಿಸಿದ್ದೀರಿ. ನಿಮಗೆ ನಾವು ಸದಾ ಕೃತಜ್ಞ್ಞರು. ಈ ಸಹಾಯ ಮುಂದುವರೆಸುವುದರ ಜೊತೆಗೆ ನಿಮ್ಮ ಆತ್ಮೀಯರಿಂದಲೂ ಈ ಅಕ್ಷರ ಆಂದೋಲನಕ್ಕೆ ಕೈಜೋಡಿಸಲು ಪ್ರೇರೇಪಿಸಿ ಎಂದು ವಿನಂತಿಸುತ್ತೇವೆ.
-ಮಾವೆಂಸ,
ಸಂಚಾಲಕರು, ೨೨.೧೦.೨೦೧೦

No comments:

Post a Comment